+91 8255-266211
info@shreeodiyoor.org

20ನೇ ತುಳು ಐಸಿರೊ ‘ತುಳು ಸಾಹಿತ್ಯ ಸಮ್ಮೇಳನ’ ಉದ್ಘಾಟಿಸಿ ಒಡಿಯೂರು ಶ್ರೀ ಆಶೀರ್ವಚನ

“ಮನೆ, ಮನೆಗಳಲ್ಲಿ ತುಳು ಭಾಷೆ ಮಾತನಾಡುವ ಮೂಲಕ ತುಳು ಮಾತೆಯ ಉತ್ಸವ ನಡೆಯಬೇಕು. ವಿಶ್ವವಿದ್ಯಾನಿಲಯಗಳಲ್ಲಿ ತುಳು ಭಾಷೆಗೆ ಮಾನ್ಯತೆ ಸಿಕ್ಕಿರುವುದರಿಂದ ತುಳುವಿನ ಭವಿಷ್ಯ ಭದ್ರವಾಗಿದೆ. ತುಳುವರು ಕಾರ್ಯಕ್ಕೆ ಇಳಿದಾಗ ಮಾತ್ರ ನಮ್ಮ ತುಳು ಭಾಷೆಯು 8ನೇ ಪರಿಚ್ಛೇದಕ್ಕೆ ಸೇರಲು ಸಾಧ್ಯ. ಆನಂದದ ಮೂಲ ತ್ಯಾಗದಲ್ಲಿದೆ. ತ್ಯಾಗದಲ್ಲಿ ಮಾತ್ರ ಆನಂದದ ಅನುಭವವಿದೆ. ತುಳುವರಲ್ಲಿ ಹೃದಯ ಸಿರಿವಂತಿಕೆ ಇದೆ” ಎಂದು 20ನೇ ತುಳು ಐಸಿರೊ ‘ತುಳು ಸಾಹಿತ್ಯ ಸಮ್ಮೇಳನ’ವನ್ನು ಉದ್ಘಾಟಿಸಿ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಆಶೀರ್ವಚನಗೈದರು.

ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಸಮ್ಮೇಳಾನಾಧ್ಯಕ್ಷತೆ ವಹಿಸಿದ್ದ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಎ. ಸುಬ್ಬಣ್ಣ ರೈ ಅವರು ಮಾತನಾಡಿ “ರಾಜ್ಯದಲ್ಲಿ ಕನ್ನಡ ಬಳಕೆಯ ಮಧ್ಯೆ ತುಳುವನ್ನು ಸುಭದ್ರವಾಗಿಸುವುದು ಸವಾಲಿನ ಕಾರ್ಯ. ತುಳು ಭಾಷೆಯ ವಿವಿಧ ಪ್ರಬೇಧಗಳ, ಒಳಮಗ್ಗುಲಗಳ ಬಗ್ಗೆ ಆಳವಾದ ಅಧ್ಯಯನ ನಡೆಯಬೇಕು. ತುಳು ಭಾಷೆ-ಸಂಸ್ಕೃತಿ ವಿಚಾರದ ಬಗ್ಗೆ ಪ್ರತಿಯೊಬ್ಬರು ಅಭಿಮಾನ ಇಡಬೇಕು” ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಪಿ.ಎಸ್. ಯಡಪಡಿತ್ತಾಯ ಅವರು ಶ್ರೀ ಮಲಾರು ಜಯರಾಮ ರೈ ಅವರು ಬರೆದ ‘ಅವಧೂತೆರೆ ಪಜ್ಜೆಲು’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿ “ಒಡಿಯೂರು ಶ್ರೀಗಳು ಕಲೆ-ಸಾಹಿತ್ಯಕ್ಕೆ ಬೆಂಬಲ ನೀಡುವ ಸಂತರಾಗಿದ್ದಾರೆ. ತುಳು ತೇರು ಎಳೆಯಲು ನಾವೆಲ್ಲರೂ ಕೈಜೋಡಿಸಬೇಕು. ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ಪ್ರತಿಯೊಬ್ಬ ತುಳುವರು ಪ್ರಯತ್ನಿಸಬೇಕು” ಎಂದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಶ್ರೀ ದಯಾನಂದ ಜಿ.ಕತ್ತಲ್‍ಸಾರ್ ಮಾತನಾಡಿ “ಅಕಾಡೆಮಿಯ ಬೆಳ್ಳಿಹಬ್ಬದ ಅಂಗವಾಗಿ 25ಕಡೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ವಿಶ್ವ ತುಳು ಸಾಹಿತ್ಯ ಸಮ್ಮೇಳನ, ತುಳು ಲಿಪಿಯಲ್ಲಿ ಕ್ರಾಂತಿ ಮಾಡಬೇಕೆಂಬ ಆಶಯವಿದೆ” ಎಂದರು. ಕೇರಳ ತುಳು ಅಕಾಡೆಮಿಯ ಅಧ್ಯಕ್ಷ ಶ್ರೀ ಉಮೇಶ್ ಸಾಲ್ಯಾನ್ ಅವರು ಶುಭಹಾರೈಸಿದರು.

ತುಳು ಸಮ್ಮೇಳನ ಸಮಿತಿಯ ಸಂಚಾಲಕ ಡಾ. ವಸಂತಕುಮಾರ್ ಪೆರ್ಲ ಪ್ರಸ್ತಾವನೆಗೈದು ಸ್ವಾಗತಿಸಿದರು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಬಂಟ್ವಾಳ ತಾಲೂಕು ವಿಸ್ತರಣಾಧಿಕಾರಿ ಶ್ರೀ ಸದಾಶಿವ ಅಳಿಕೆ ಕಾರ್ಯಕ್ರಮ ನಿರೂಪಿಸಿದರು. ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಮುಖ್ಯ ಶಿಕ್ಷಕ ಶ್ರೀ ಜಯಪ್ರಕಾಶ್ ಶೆಟ್ಟಿ ವಂದಿಸಿದರು. ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ರೇಣುಕಾ ಎಸ್.ರೈ ಆಶಯಗೀತೆ ಹಾಡಿದರು. ಶ್ರೀ ಯಶವಂತ ವಿಟ್ಲ ಸಮ್ಮೇಳಾನಾಧ್ಯಕ್ಷರನ್ನು ಪರಿಚಯಿಸಿದರು.

ಕಾರ್ಯಕ್ರಮದ ಮೊದಲಿಗೆ ಶ್ರೀ ಸಂಸ್ಥಾನದ ಸಮ್ಮೇಳನದ ಸಭಾವೇದಿಕೆಗೆ ಪೂಜ್ಯ ಶ್ರೀಗಳವರನ್ನು, ಸಮ್ಮೇಳನಾಧ್ಯಕ್ಷರನ್ನು ಹಾಗೂ ಮುಖ್ಯ ಅತಿಥಿಗಳನ್ನು ಭವ್ಯ ಮೆರವಣಿಗೆಯ ಮೂಲಕ ಕರೆತರಲಾಯಿತು.

ತುಲಿಪು ಗೋಷ್ಠಿ:
ಈ ಸುಸಂದರ್ಭ ಋಷಿ-ಕೃಷಿ-ಪರಪೋಕುದ ಸಂಸ್ಕೃತಿ ಎಂಬ ವಿಚಾರವಾಗಿ ಗೋಷ್ಠಿ ನಡೆಯಿತು. ಬೆಂಗಳೂರು ರಾಷ್ಟ್ರೀಯ ಸೇವಾ ಯೋಜನೆಯ ರಾಜ್ಯ ಸಂಚಾಲಕ ಡಾ. ಗಣನಾಥ ಶೆಟ್ಟಿ ಎಕ್ಕಾರು ಅವರು ಋಷಿ ಸಂಸ್ಕೃತಿಯ ಬಗ್ಗೆ ಮಾತನಾಡಿ “ಋಷಿ ಸಂಸ್ಕೃತಿಯ ಸಂಬಂಧ ತುಳುವಿಗಿದೆ. ಅವೈದಿಕ ಮತ್ತು ವೈದಿಕ ಸಂಸ್ಕೃತಿ ಸಮಾನವಾಗಿ ಹರಿಯುತ್ತಿದೆ” ಎಂದರು.
ನಿವೃತ್ತ ಪ್ರಾಧ್ಯಾಪಕ ಡಾ. ಪ್ರಭಾಕರ ಶಿಶಿಲ ಅವರು ಕೃಷಿ ಸಂಸ್ಕೃತಿಯ ಬಗ್ಗೆ ಮಾತನಾಡಿ “ಬ್ರಿಟಿಷರು ಬಿಟ್ಟುಹೋದ ಹಣದ ಸಂಸ್ಕೃತಿ ದೇಶವನ್ನಾವರಿಸಿದೆ. ತುಳುವರಿಗೆ ಆಲಸ್ಯ ಜಾಸ್ತಿಯಾಗಿದೆ. ಕೃಷಿ ಸಂಸ್ಕೃತಿಗೆ ಭಾರಿ ಏಟು ಬಿದ್ದಿದೆ. ಗದ್ದೆಯಲ್ಲಿ ರಬ್ಬರ್ ಬೆಳೆ ಮಾಡಿ ಬೇಸಾಯ ಮಾಯವಾಗಿದೆ” ಎಂದು ಹೇಳಿದರು.

ಬೆಳ್ತಂಗಡಿ ವಾಣಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಡಿ. ಯದುಪತಿ ಗೌಡ ಅವರು ಪರಪೋಕುದ ಸಂಸ್ಕೃತಿ ಬಗ್ಗೆ ಮಾತನಾಡಿ “ಸಂಸ್ಕೃತಿ ಉಳಿಯಲು ಎಲ್ಲರ ಪ್ರಯತ್ನ ಬೇಕು. ಭಾಷೆ ಉಳಿಯಬೇಕು. ಪರಂಪರೆಯ ಜ್ಞಾನ ಬೇಕು” ಎಂದು ಅಭಿಪ್ರಾಯಪಟ್ಟರು.

ಗೋಷ್ಠಿಯಲ್ಲಿ ಶ್ರೀ ಯಶವಂತ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಬೆಳ್ತಂಗಡಿ ಶಾಖೆಯ ವ್ಯವಸ್ಥಾಪಕ ಶ್ರೀ ನಿತ್ಯಾನಂದ ಶೆಟ್ಟಿ ಮನವಳಿಕೆ ಸ್ವಾಗತಿಸಿದರು. ಶ್ರೀ ರಾಧಾಕೃಷ್ಣ ಕನ್ಯಾನ ವಂದಿಸಿದರು.

ಕಾವ್ಯ-ಪದ-ಚಿತ್ರೊ-ನಲಿಕೆ:
ಶ್ರೀ ಮಲಾರು ಜಯರಾಮ ರೈ, ಶ್ರೀ ಹರೀಶ್ ಶೆಟ್ಟಿ ಸೂಡ, ಶ್ರೀ ಪೂವಪ್ಪ ನೇರಳಕಟ್ಟೆ, ಶ್ರೀ ವಿಶ್ವನಾಥ ಕುಲಾಲ್ ಮಿತ್ತೂರು, ಶ್ರೀಮತಿ ರಾಜಶ್ರೀ ಟಿ.ರೈ ಪೆರ್ಲ, ಶ್ರೀಮತಿ ಆಶಾ ದಿಲೀಪ್ ವರ್ಕಾಡಿ ಅವರು ರಚಿಸಿದ ತಮ್ಮ ತಮ್ಮ ಕವನಗಳನ್ನು ವಾಚಿಸಿದರು. ಕವನಗಳಿಗೆ ಶ್ರೀ ರವಿರಾಜ ಶೆಟ್ಟಿ ಒಡಿಯೂರು ಸಂಗೀತ ಸಂಯೋಜಿಸಿ ಹಾಡಿದರು. ಶ್ರೀಮತಿ ಜಯಮಾಲಾ ಪಾವೂರು ನೃತ್ಯ ಸಂಯೋಜಿಸಿ ತಮ್ಮ ವಿದ್ಯಾರ್ಥಿಗಳಿಂದ ನೃತ್ಯ ಪ್ರಸ್ತುತ ಪಡಿಸಿದರು. ಶ್ರೀ ಗಣೇಶ್ ಸೋಮಯಾಜಿ ಮತ್ತು ಶ್ರೀ ಶರತ್ ಹೊಳ್ಳ ಮಂಗಳೂರು ಇವರು ಕವನಗಳುಗೆ ಮೂಡಿಸಿದ ವರ್ಣಚಿತ್ರಗಳು ಚೇತೋಹಾರಿಯಾಗಿತ್ತು.

ಶ್ರೀ ಸದಾಶಿವ ಶೆಟ್ಟಿ ಕನ್ಯಾನ ಸ್ವಾಗತಿಸಿ, ಶ್ರೀಮತಿ ವಿಜಯಾ ಶೆಟ್ಟಿ ಸಾಲೆತ್ತೂರು ಕಾರ್ಯಕ್ರಮ ನಿರ್ವಹಿಸಿದರು. ಶ್ರೀ ಸಂತೋಷ್ ಭಂಡಾರಿ ವಂದಿಸಿದರು.

ಸಮಾರೋಪ ಸಮಾರಂಭ:
“ಒಳ್ಳೆಯ ಕಾರ್ಯಕ್ಕೆ ಸೇರಿಕೊಳ್ಳುವ ಮನಸ್ಸುಗಳ ಅಗತ್ಯವಿದೆ. ಕೃಷಿ-ಋಷಿ ಸಂಸ್ಕೃತಿ ಬದುಕಿನ ಎರಡು ಕಣ್ಣುಗಳಾಗಿವೆ. ತುಳು ಸಾಹಿತ್ಯ ಸಮ್ಮೇಳನ ಸಮಾಜಕ್ಕೆ ಉತ್ತಮ ಸಂದೇಶ ನೀಡಿದೆ” ಎಂದು ಪೂಜ್ಯ ಶ್ರೀಗಳವರು ತುಳು ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಂದೇಶ ನೀಡಿದರು.

ಸಾಧ್ವಿ ಶ್ರೀ ಮಾತಾನಂದಮಯೀಯವರು ಆಶೀರ್ವಚನಗೈದು “ಕುಂಬಳೆ ಅರಸರ ಆಳ್ವಿಕೆಯಲ್ಲಿ ತುಳು ಭಾಷೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಬಳಿಕದ ಅರಸರ ಕಾಲದಲ್ಲಿ ಭಾಷೆಗೆ ಅಷ್ಟು ಮಹತ್ವ ಸಿಕ್ಕಿರಲಿಲ್ಲ. ಯುವ ಪೀಳಿಗೆಗೆ ತುಳುವಿನ ವಿಚಾರ ನೀಡುವ ಕಾರ್ಯವಾಗಬೇಕು” ಎಂದು ತಿಳಿಸಿದರು.

ಸಮ್ಮೇಳನಾಧ್ಯಕ್ಷ ಡಾ. ಎ. ಸುಬ್ಬಣ್ಣ ರೈಯವರು ಮಾತನಾಡಿ “ತುಳುನಾಡಿನ ಆಚಾರಗಳಲ್ಲಿ ವಿಶಿಷ್ಟ ಅರ್ಥವಿದೆ. ತುಳು ಭಾಷೆಯು ಸಂಸ್ಕೃತಿಯ ಬಗ್ಗೆ ಯುವ ಸಮುದಾಯಕ್ಕೆ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ತುಳು ಭಾಷೆಯ ಮೇಲೆ ಬಹಳಷ್ಟು ಕೆಲಸಗಳು ನಡೆಯಬೇಕು. ಪ್ರಾದೇಶಿಕ ಭಾಷೆಗಳ ಅಧ್ಯಯನ ನಡೆಯಬೇಕು” ಎಂದರು.

ಮುಖ್ಯ ಅತಿಥಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಶ್ರೀ ಎಂ.ಎಲ್. ಸಾಮಗ ಅವರು ಮಾತನಾಡಿ “ಹಿರಿಯರು ಸಮಾಜಕ್ಕೆ ಭಾಷೆ-ಸಂಸ್ಕೃತಿ ತಿಳಿಸುವ ಕಾರ್ಯ ಮಾಡಬೇಕು. ಬಾಲ್ಯದಲ್ಲಿ ಭಾಷೆ ಹಾಗೂ ಸಂಸ್ಕೃತಿಯನ್ನು ಕಲಿಸುವ ಕಾರ್ಯವಾಗಬೇಕು. ಮಣ್ಣಿನ ಗುಣವನ್ನು ಅನುಸರಿಸುವ ಕಾರ್ಯ ಮಾಡಬೇಕು. ಭೂತಾರಾಧನೆಯಲ್ಲಿ ತುಳು ಭಾಷೆಯ ನೈಜ ಸುಗಂಧವಿದೆ. ತುಳು ಸಂಸ್ಕೃತಿ, ಜೀವನವನ್ನು ಅರಿತಾಗ ಸಾಹಿತ್ಯ ಬೆಳೆಯಲು ಸಾಧ್ಯ” ಎಂದರು.

ಸಮಾರಂಭದಲ್ಲಿ ಯೋಗ ಸಾಧಕ ಶ್ರೀ ಜಗದೀಶ್ ಶೆಟ್ಟಿ ಬಿಜೈ, ಮಾಜಿ ಸೈನಿಕ-ಮುಳುಗು ತಜ್ಞ ಶ್ರೀ ಕಮಲಾಕ್ಷ ಬಂಗೇರ ಹರಿವೇಕಳ, ನಾಟಿವೈದ್ಯೆ ಶ್ರೀಮತಿ ಲಕ್ಷ್ಮೀ ಬೇಡಗುಡ್ಡೆ, ಕೃಷಿಕ ಶ್ರೀ ಬಾಲಕೃಷ್ಣ ಶೆಟ್ಟಿ ಪಾವೂರು, ದೈವಾರಾಧನೆಯ ಶ್ರೀ ಕುಟ್ಟಿ ನಲಿಕೆ ನಂದರಬೆಟ್ಟು ಅವರಿಗೆ ತುಳುಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶ್ರೀ ದೇವಿಪ್ರಸಾದ್ ಶೆಟ್ಟಿ ಬೆಜ್ಜ ಕಾರ್ಯಕ್ರಮ ನಿರೂಪಿಸಿದರು. ಒಡಿಯೂರು ಜೈ ಗುರುದೇವ ಕಲಾಕೇಂದ್ರದ ಅಧ್ಯಕ್ಷ ಶ್ರೀ ಸುಬ್ರಹ್ಮಣ್ಯ ಒಡಿಯೂರು ಸ್ವಾಗತಿಸಿ, ಶ್ರೀ ಮಾತೇಶ್ ಭಂಡಾರಿ ವಂದನಾರ್ಪಣೆಗೈದರು.

 

The divine power, success, achievements, sacrifice, courage, spirituality, social thinking and humble service of his holiness have contributed a lot to the success of the Shree Samsthanam.

 
Shree Gurudevananda Swamiji
Back To Top