+91 8255-266211
info@shreeodiyoor.org

ಶ್ರೀ ಹನುಮೋತ್ಸವದ ಧರ್ಮಸಭೆಯಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ

“ಮಕ್ಕಳಲ್ಲಿ ಭಾರತೀಯತೆಯ ಬೀಜ ಬಿತ್ತುವ ಕಾರ್ಯ ಮಾಡೋಣ” ಶ್ರೀ ಹನುಮೋತ್ಸವದ ಧರ್ಮಸಭೆಯಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ

ಎ.16: “ಗುರುತತ್ತ್ವದ ಬೋಧನೆ ಅತೀ ಅಗತ್ಯ. ಆಕಾಶತತ್ತ್ವ ಶುದ್ಧವಾಗಿರು ವಂತದ್ದು. ಅದಕ್ಕೆ ಹೃದಯದ ಗುಣವಿದೆ. ಧರ್ಮಯುಕ್ತ ಕರ್ಮ ಜೀವನದಲ್ಲಿ ಅಳವಡಿಕೆಯಾಗಬೇಕು. ಇದರಿಂದ ಯಾವುದೇ ಅಪಾಯವಿಲ್ಲ. ರಾಮಾಯಣವು ಭಾರತೀಯ ಸಂಸ್ಕøತಿಯ ಕಣ್ಣು. ಬದುಕು ರೂಪಿಸಲು ಇದು ಸಹಕಾರಿ. ಇಂದಿನ ಕಾಲಘಟ್ಟದಲ್ಲಿ ಬದುಕು ರೂಪಿಸುವ ಶಿಕ್ಷಣದ ಅಗತ್ಯವೂ ಇದೆ. ಪದವಿಯ ವ್ಯಾಮೋಹ ಬಿಟ್ಟು ಮಕ್ಕಳ ಕನಸನ್ನು ನನಸು ಮಾಡುವ ಪ್ರಯತ್ನ ಪೋಷಕರದು. ದೇಶ ಉಳಿದರೆ ಧರ್ಮ ಉಳಿಯುವುದು. ದೇಶದ ರಕ್ಷಣೆಯಲ್ಲಿ ನಮ್ಮದೂ ಪಾಲಿರಬೇಕು. ಮಕ್ಕಳಲ್ಲೂ ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಅನ್ನವೀಯುವ ರೈತ ಮತ್ತು ದೇಶ ಕಾಯುವ ಸೈನಿಕನನ್ನು ಮರೆಯಬಾರದು. ಈಶಪ್ರೇಮದ ಜೊತೆಗೆ ದೇಶ ಪ್ರೇಮವೂ ಬೇಕು. ಮಕ್ಕಳಲ್ಲಿ ಭಾರತೀಯತೆಯ ಬೀಜ ಬಿತ್ತುವ ಕಾರ್ಯ ಮಾಡೋಣ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಶ್ರೀ ಹನುಮಜ್ಜಯಂತಿಯ ಸಂದೇಶ ನೀಡಿದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಜರಗಿದ ಶ್ರೀಮದ್ರಾಮಾಯಣ ಮಹಾಯಜ್ಞ – ಶ್ರೀ ಹನುಮೋತ್ಸವದ ಸುಸಂದರ್ಭ ಜರಗಿದ ಧರ್ಮಸಭೆಯಲ್ಲಿ ಸ್ವಹಸ್ತಾಕ್ಷರದ ತುಳುಲಿಪಿಯ ಸ್ಕಾಂದ ಪುರಾಣಾಂತರ್ಗತ ‘ಶ್ರೀಗುರುಗೀತೆ’ ಕೃತಿಯನ್ನು ಲೋಕಾರ್ಪಣೆಗೈದು ಆಶೀರ್ವಚನ ನೀಡಿದ ಪೂಜ್ಯ ಶ್ರೀಗಳವರು “ಜೀವ-ದೇವನ ಸಂಬಂಧದ ಬೆಸುಗೆ ಹನುಮಂತ. ಹನುಮಂತನ ಆದರ್ಶದಂತೆ ಶ್ರೀ ಸಂಸ್ಥಾನದ ಬೆಳವಣಿಗೆಯಲ್ಲಿ ಭಕ್ತರ ತ್ಯಾಗಪೂರ್ಣ ಸೇವೆಯೂ ಇದೆ. ಇದರ ಆಸ್ತಿಯೂ ಭಗವದ್ಭಕ್ತರೇ. ಉಳಿಸಿ ಬೆಳೆಸುವ ಕಾರ್ಯವೂ ತಮ್ಮದೇ” ಎಂದರು.
ಈ ಸುಸಂದರ್ಭ ಉಪಸ್ಥಿತರಿದ್ದ ಶ್ರೀ ಮಹಾಲಕ್ಷ್ಮೀ ಕ್ಷೇತ್ರ, ಶ್ರೀಧಾಮ ಮಾಣಿಲದ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಿ “ಅಯೋಧ್ಯೆಯ ಶ್ರೀ ರಾಮಮಂದಿರದ ಶಕ್ತಿಯೇ ಆಂಜನೇಯ. ರಾಮನ ತಾರಕಮಂತ್ರ ಎಲ್ಲಿ ನಡೆಯುತ್ತವೆಯೋ ಅಲ್ಲಿ ಆಂಜನೇಯ ಇರುತ್ತಾನೆ. ನಮ್ಮ ನರನಾಡಿಗಳಿಗೆ ಚೇತನ ಕೊಡುವ ಆಂಜನೇಯ ಎಲ್ಲರಿಗೂ ಶಕ್ತಿ ನೀಡಲಿ. ಒಡಿಯೂರು ಶ್ರೀಗಳವರು ಅವಿರತವಾಗಿ ಸಮಾಜದ ಬಗ್ಗೆ ಚಿಂತಿಸಿ ಗ್ರಾಮವಿಕಾಸ ಯೋಜನೆಯ ಮೂಲಕ ಸ್ವಾಭಿಮಾನಿ ಬದುಕಿಗೆ ಪ್ರೇರಣೆ ನೀಡುತ್ತಿದ್ದಾರೆ.” ಎಂದರು.
ಲೋಕಾರ್ಪಣೆಗೊಂಡ ತುಳುಲಿಪಿ “ಶ್ರೀಗುರುಗೀತಾ” ಕೃತಿಯ ಬಗ್ಗೆ ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಪ್ರಸ್ತಾವನೆಗೈದರು.
ಸಮಾರಂಭದಲ್ಲಿ ಪೂಜ್ಯ ಶ್ರೀಗಳವರು ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ವಿವಿಧ ಘಟಸಮಿತಿಗಳ ಸ್ವ-ಸಹಾಯ ಸಂಘಗಳಿಗೆ ಲಾಭಾಂಶ ವಿತರಣೆ ಮಾಡಿದರು. ಶ್ರೀ ರಾಮನವಮಿಯಿಂದ ಶ್ರೀ ಹನುಮಜ್ಜಯಂತಿಯ ತನಕ ಜರಗಿದ ಅಖಂಡ ಭಗವನ್ನಾಮ ಸಂಕೀರ್ತನೆಯ ಯಶಸ್ಸಿಗೆ ಸಹಕರಿಸಿದ ಭಜನಾ ಮಂಡಳಿಗಳಿಗೆ ಗೌರವಾರ್ಪಣೆ ಮಾಡಲಾಯಿತು.
ಸಮಾರಂಭದ ವೇದಿಕೆಯಲ್ಲಿ ಮುಂಬೈನ ಉದ್ಯಮಿಗಳಾದ ಶ್ರೀ ವಾಮಯ್ಯ ಬಿ. ಶೆಟ್ಟಿ, ಶ್ರೀ ರವೀಂದ್ರ ಶೆಟ್ಟಿ ಪೇಟೆಮನೆ, ಶ್ರೀ ಜಯ ಶೆಟ್ಟಿ ವಾಶಿ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಶ್ರೀ ಎ. ಸುರೇಶ್ ರೈ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಯೋಜನಾ ನಿರ್ದೇಶಕ ಶ್ರೀ ಕಿರಣ್ ಉರ್ವ ಉಪಸ್ಥಿತರಿದ್ದರು.
ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಮುಖ್ಯಶಿಕ್ಷಕಿ ಶ್ರೀಮತಿ ರೇಣುಕಾ ಎಸ್.ರೈ ಪ್ರಾರ್ಥಿಸಿದರು. ಒಡಿಯೂರುದ ತುಳುಕೂಟದ ಅಧ್ಯಕ್ಷ ಶ್ರೀ ಯಶವಂತ ವಿಟ್ಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಮಾತೇಶ್ ಭಂಡಾರಿ ವಂದಿಸಿದರು.
ಧಾರ್ಮಿಕ ಕಾರ್ಯಕ್ರಮಗಳು:
ಪ್ರಾತಃಕಾಲ ಅಖಂಡ ಭಗವನ್ನಾಮ ಸಂಕೀರ್ತನೆಯ ಮಂಗಲ, ಮಹಾಮಂಗಳಾರತಿ ಜರಗಿತು. ಸ್ವಯಂಭೂ ನಾಗರಾಜ ಸನ್ನಿಧಿಯಲ್ಲಿ ಪಂಚಾಮೃತ ಅಭಿಷೇಕ, ನಾಗತಂಬಿಲದ ಬಳಿಕ ಶ್ರೀಮದ್ರಾಮಾಯಣ ಮಹಾಯಜ್ಞ ಆರಂಭಗೊಂಡಿತು. ಮಧ್ಯಾಹ್ನ ಮಹಾಯಜ್ಞದ ಪೂರ್ಣಾಹುತಿ, ಮಹಾಪೂಜೆ, ಮಹಾಸಂತರ್ಪಣೆ ನಡೆಯಿತು.
ರಾತ್ರಿ ಸಾಮೂಹಿಕ ಶ್ರೀ ಹನುಮದ್ವ್ರತಪೂಜೆ, ರಂಗಪೂಜೆ, ವಿಶೇಷ ಬೆಳ್ಳಿರಥೋತ್ಸವ, ಉಯ್ಯಾಲೆಸೇವೆ ಸಂಪನ್ನಗೊಂಡಿತು.

 

The divine power, success, achievements, sacrifice, courage, spirituality, social thinking and humble service of his holiness have contributed a lot to the success of the Shree Samsthanam.

 
Shree Gurudevananda Swamiji
Back To Top