+91 8255-266211
info@shreeodiyoor.org

“ಭಾರತೀಯ ಸಂಸ್ಕೃತಿಯಲ್ಲಿ ಆರೋಗ್ಯಪೂರ್ಣ ಬದುಕು” – ಒಡಿಯೂರು ಶ್ರೀ

“ನಿಮಗೆಲ್ಲ ಹನುಮಜ್ಜಯಂತಿಯ ಶುಭಾಶಯಗಳು. 

ಭಾರತದ ಪ್ರಸಿದ್ಧ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತ ಭಾರತೀಯ ಸಂಸ್ಕೃತಿಯ ನಯನಗಳು. ಇವು ಅರ್ಥಪೂರ್ಣವಾಗಿ, ಆರೋಗ್ಯಪೂರ್ಣವಾಗಿ ಬದುಕನ್ನು ರೂಪಿಸುವ ಪಠ್ಯಗಳಿದ್ದಂತೆ. ಭಾವೀ ಬ್ರಹ್ಮನೆನಿಸಿದ ಚಿರಂಜೀವಿ ಹನುಮಂತನ ವಿಶೇಷತೆಗಳನ್ನು ರಾಮಾಯಣ ಮಹಾಕಾವ್ಯದ ಸುಂದರಕಾಂಡದಲ್ಲಿ ನೋಡಬಹುದು. ಇಷ್ಟಾರ್ಥ ಸಿದ್ಧಿಗಾಗಿ ಸುಂದರಕಾಂಡ ಪಾರಾಯಣ ಮಾಡುವಂತದ್ದು ಪ್ರತೀತಿ. ‘ಸುಂದರ’ ಅಂದರೆ ಚೆನ್ನಾಗಿರುವವ ಎಂದರ್ಥವಾದರೂ ಅಂತರಂಗ-ಬಹಿರಂಗವನ್ನು ಸುಂದರವಾಗಿರಿಸಿಕೊಂಡವ. ಅಧ್ಯಾತ್ಮದ ವಿಚಾರಗಳನ್ನು ಅನುಭವ ಮಾಡುವವರಿಗೆ ಹನುಮಂತನೇ ಮಾರ್ಗದರ್ಶಿ. ಜ್ಞಾನದ ಹಸಿವಿರುವವರಿಗೆ ಆತ್ಮಜ್ಞಾನದ ಆಹಾರ ಕೊಡಿಸುವವ ಆಂಜನೇಯ. ಮಾತುಗಳ ಮಧುರತೆ, ವ್ಯಾಕರಣ ಶುದ್ಧವಾದ ವಾಕ್‍ಗಳು, ಪ್ರೀತಿ-ನೀತಿ ಕೋವಿದನಾಗಿ ತನ್ನ ಬದುಕನ್ನೇ ಶ್ರೀರಾಮನಿಗಾಗಿ ಅರ್ಪಿಸಿದ ದಾಸಶ್ರೇಷ್ಠ ಮಹಾನುಭಾವ. ಇದೀಗ ಸಮಾಜವನ್ನು ಕಾಡುತ್ತಿರುವ ಮಹಾಮಾರಿಯ ನಿವಾರಣೆಗೆ ಹನುಮದುಪಾಸನೆಯಲ್ಲಿ ಪರಿಹಾರವಿದೆ. ರೋಗಭೀತಿಗಳನ್ನು ನೀಗುವ ಶಕ್ತಿ ಇದರಲ್ಲಿದೆ. ಭಾರತೀಯತೆಯು ಷೋಡಷ ಸಂಸ್ಕಾರಗಳಿಂದ ತುಂಬಿರುತ್ತದೆ. ಆಗುಹೋಗುಗಳು, ಆಹಾರ-ವಿಹಾರಗಳು, ಮಾತು-ಮೌನಗಳು, ಶುದ್ಧತೆಗಳು, ಆಸನಗಳು, ಅಂತರಗಳು, ಯೋಗಾಭ್ಯಾಸಗಳು, ಯಮ-ನಿಯಮಗಳು, ಒಟ್ಟು ಅಷ್ಟಾಂಗ ಯೋಗದಿಂದ ಇರವಿನ ಅರಿವನ್ನು ಮೂಡಿಸಬಹುದಾಗಿದೆ. ಇಲ್ಲಿ ನಮಗೆ ಕಾಣುವಂತಹದ್ದು ಅಷ್ಟಸಿದ್ಧಿಯ ಹನುಮಂತನ ಪ್ರಭಾವ. ರಾಮಾಯಣದ ಜೀವಾಳವಾಗಿ ಹನುಮಂತನನ್ನು ಉಲ್ಲೇಖಿಸುತ್ತಾರೆ.

ಜೀವ-ದೇವನ ಸಂಬಂಧವನ್ನು ಭಾವದಲ್ಲಿ ಕಾಣುವ ಚಿತ್ರಣ ಇದರಲ್ಲಿ ಮೂಡಿದೆ. ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಹನುಮಂತನ ಪರಾಕ್ರಮ, ಅರ್ಪಣಾಭಾವದ ತೇಜಸ್ಸು, ಕ್ರಿಯಾಶೀಲತೆ, ಗಂಭೀರತೆ ಮುಖ್ಯವಾಗಿ ಇಂದ್ರಜಿತುವಿನ ಶರಕ್ಕೆ ತುತ್ತಾಗಿ ಶ್ಲೇಷ್ಮನಾಡಿಯನ್ನು ಹರಿದುಕೊಂಡು ಮೂರ್ಛಿತನಾದ ಲಕ್ಷ್ಮಣದೇವನ ರಕ್ಷಣೆಗೆ ಸಂಜೀವಿನಿ ಪರ್ವತವನ್ನೇ ಹೊತ್ತು ತಂದಂತಹ ಕೀರ್ತಿ ಹನುಮನದು. ‘ರಾಮಾ’ ಎಂಬ ಶಬ್ದದಲ್ಲಿ ಆರಂಭದ ‘ರಾ’, ಮಾರುತಿ ಶಬ್ದದ ಆರಂಭದ ಅಕ್ಷರ ‘ಮಾ’ ಸೇರಿ ‘ರಾಮಾ’ ಆಯಿತು. ರಾಮನನ್ನು ಬಿಟ್ಟು ಹನುಮಂತನಿಲ್ಲ; ಹನುಮಂತನನ್ನು ಬಿಟ್ಟು ರಾಮನಿಲ್ಲ. ರಾಮಾಂಜನೇಯರನ್ನು ಮರೆತ ಭಾರತೀಯನೂ ಇಲ್ಲ. ದೇಶ, ದೇಹ, ಮನಸ್ಸುಗಳ ಸ್ವಾಸ್ಥ್ಯಕ್ಕಾಗಿ ರಾಮಾಯಣವು ಮಹದೌಷಧ. ಶ್ರೀಮಹಾವಿಷ್ಣುವು ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಸುಖ-ದುಃಖಗಳಿಂದ ಕೂಡಿದ ಜೀವನವನ್ನು ಹೇಗೆ ಸಾಗಿಸಬೇಕು ಎಂಬುದಕ್ಕೆ ಉತ್ತರವಾಗಿ ಧರ್ಮವೇ ರಾಮಾವತಾರವಾಯಿತು. ನಾವೂ ಅಷ್ಟೇ ಭಯಗೊಳ್ಳದೆ ಅಭಯದ ಪ್ರಜ್ಞೆಯೊಂದಿಗೆ ಆದರ್ಶಗಳನ್ನು ಪಾಲಿಸಿಕೊಂಡು ಬಂದಾಗ ಬದುಕು ಅರ್ಥಪೂರ್ಣವಾಗುವುದು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಹನುಮೋತ್ಸವದ ಪ್ರಯುಕ್ತ ಜರಗಿದ ಸರಳ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಸಂದೇಶ ನೀಡಿ ಮಹಾಮಾರಿಯ ನಿವಾರಣೆಗಾಗಿ ವಿಶೇಷವಾಗಿ ಪ್ರಾರ್ಥಿಸಿದರು.

ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದರು. ಶ್ರೀ ಗಣಪತಿ ಹವನ, ಶ್ರೀರಾಮತಾರಕಮಂತ್ರ ಪುರಸ್ಸರ ಹನುಮ ಹವನವನ್ನು ಕುರೋಮೂಲೆ ವೇ|ಮೂ| ಚಂದ್ರಶೇಖರ ಉಪಾಧ್ಯಾಯರ ನಿರ್ದೇಶನದಲ್ಲಿ ಕೇಕಣಾಜೆ ವೇ|ಮೂ| ಪ್ರಕಾಶ್ ಭಟ್ ಹಾಗೂ ವೇ|ಮೂ| ಶುಕ್ಲಶ್ಯಾಮ ಭಟ್ ಇವರು ನೆರವೇರಿಸಿದರು. ಆರಾಧ್ಯ ದೇವರಿಗೆ ವಿಶೇಷ ಪೂಜೆ ಜರಗಿತು. ಶ್ರೀ ಸಂಸ್ಥಾನದ ನಿತ್ಯ ಸೇವಾ ಕಾರ್ಯಕರ್ತರು ಸಹಕರಿಸಿದರು.

 

The divine power, success, achievements, sacrifice, courage, spirituality, social thinking and humble service of his holiness have contributed a lot to the success of the Shree Samsthanam.

 
Shree Gurudevananda Swamiji
Back To Top