+91 8255-266211
info@shreeodiyoor.org

ಗ್ರಾಮೋತ್ಸವ 2022

“ಅರಿವಿನೊಂದಿಗೆ ಮಾಡುವ ಸೇವೆ ಭಗವಂತನಿಗೆ ಪ್ರಿಯ”
ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ – ಗ್ರಾಮೋತ್ಸವ – ಗುರುವಂದನ ನೂತನ ಶ್ರೀ ಮಾತಾ ಅನ್ನಛತ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀಗಳವರಿಂದ ಸಂದೇಶ
ಆ. 8: “ಅರಿತು ಮಾಡಿದ ಸೇವೆ ಅರ್ಥಪೂರ್ಣವಾಗಿರುತ್ತದೆ. ಅಹಂಕಾರ, ಮಮಕಾರವಿಲ್ಲದ ಸೇವೆ ಭಗವಂತನಿಗೆ ಸಲ್ಲುತ್ತದೆ. ಜ್ಞಾನಪೂರ್ಣತೆಯಿಂದ ಸಂಪತ್ತನ್ನು ಸದ್ವಿನಿಯೋಗಿಸಿದಾಗ ಅದಕ್ಕೆ ಮೌಲ್ಯ ತುಂಬುತ್ತದೆ. ತ್ಯಾಗ ತುಂಬಿದ ಸೇವೆ ದೇಶವನ್ನು ಬೆಳಗಿಸುತ್ತದೆ. ಇವು ಬದುಕಿನಲ್ಲಿ ಬಹುಮುಖ್ಯ. ಕ್ರಿಯಾಶೀಲರಾಗಿದ್ದಾಗಲೇ ಕ್ಷೇತ್ರಾಭಿವೃದ್ಧಿ ಕ್ಷಿಪ್ರವಾಗಿ ನಡೆಯುತ್ತದೆ. ಕ್ರಿಯಾಶೀಲರಾಗಿ ಕೆಲಸ ಮಾಡುವ ಮಂದಿ ನಮ್ಮೊಂದಿಗಿದ್ದರೆ ಯಶಸ್ಸು ಖಂಡಿತ. ಅರಿವಿನೊಂದಿಗೆ ಮಾಡುವ ಸೇವೆ ದೇವರಿಗೆ ಪ್ರಿಯವಾದುದು. ಅಂತಹ ಮನಸ್ಸು ನಮ್ಮದಾಗಬೇಕು. ಇಂದಿನ ಕಾಲಸ್ಥಿತಿಯ ಬಗ್ಗೆ ನಾವು ತಿಳಿದುಕೊಳ್ಳುವ ಅಗತ್ಯವಿದೆ. ದಾನ ಗುಣ ನಮ್ಮಲ್ಲಿದ್ದಾಗ ಸಂಪತ್ತಿಗೆ ಮೌಲ್ಯ ಬರಲು ಸಾಧ್ಯ. ಜೀವನದಲ್ಲಿ ಮಾಡುವ ಪಾಪ, ಪುಣ್ಯ ನಮ್ಮೊಂದಿಗೆ ಸದಾ ಇರುತ್ತದೆ. ನಿಜವಾದ ಪ್ರೀತಿಯಿಂದ ಲೋಕವನ್ನು ಗೆಲ್ಲಬಹುದು. ಸಂತನ ಬದುಕು ಸಂತನಿಗಲ್ಲ ಅದು ಸಮಾಜದ ಹಿತಕೆ. ಸತ್ಕರ್ಮ ಮಾಡುವ ಚಿಂತನೆ ನಮ್ಮಲ್ಲಿರಬೇಕು” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಜರಗಿದ ಗ್ರಾಮೋತ್ಸವ 2022 – ಶ್ರೀಮಾತಾ ಅನ್ನಛತ್ರ ಉದ್ಘಾಟನಾ ಸಮಾರಂಭದಲ್ಲಿ ಸೇವಾ ಕಾರ್ಯಗಳಿಗೆ ಚಾಲನೆ ನೀಡಿ ಜನ್ಮದಿನದ ಸಂದೇಶ ನೀಡಿದರು.
ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಿ “ಒಡಿಯೂರು ಕ್ಷೇತ್ರದ ಮಹಿಮೆ ಅಪಾರ, ಪರಿವರ್ತನೆಯ ಹರಿಕಾರ ಒಡಿಯೂರು ಶ್ರೀಗಳು. ಒಡಿಯೂರು ಶ್ರೀಗಳು ಹೃದಯ ವೈಶಾಲ್ಯತೆ ಇರುವ ಓರ್ವ ಸಂತ. ಸಮಾಜದಲ್ಲಿ ಐಕ್ಯಮತ್ಯ ಅಗತ್ಯ. ನಮ್ಮಲ್ಲಿ ಧರ್ಮನಿಷ್ಠೆ ಮುಖ್ಯ. ಶ್ರೀಗಳ ತುಡಿತ, ಮಿಡಿತ ಸಮಾಜದ ಏಳಿಗೆಗಾಗಿ. ನೈತಿಕ ಬದ್ದತೆಯನ್ನು ಕಲಿಸುವ ಕೆಲಸ ಸಂಸ್ಥಾನದ ವಿದ್ಯಾಸಂಸ್ಥೆಗಳಿಂದಾಗುತ್ತಿದೆ. ಸುದೃಢ ಹಿಂದೂ ಸಮಾಜವನ್ನು ನಿರ್ಮಾಣ ಮಾಡಲು ನಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸುವ ಕೆಲಸವಾಗಬೇಕು. ನಮ್ಮ ಮನಸ್ಸುಗಳನ್ನು ಒಟ್ಟು ಮಾಡುವ ಕೆಲಸ ನಮ್ಮಿಂದಲೇ ಆಗಬೇಕು. ಪೂಜ್ಯ ಶ್ರೀಗಳು ಸಮಾಜಕ್ಕಾಗಿ ಮಾಡಿರುವ ತ್ಯಾಗ ಅವಿಸ್ಮರಣೀಯವಾಗಿದೆ” ಎಂದರು.
ಸಾಧ್ವಿ ಶ್ರೀ ಮಾತಾನಂದಮಯೀಯವರು ದಿವ್ಯ ಸಾನಿಧ್ಯ ಕರುಣಿಸಿದ್ದರು. ಮುಂಬೈನ ಹೇರಂಬ ಇಂಡಸ್ಟ್ರೀಸ್‍ನ ನಿರ್ದೇಶಕರೂ, ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ ಸಮಿತಿಯ ಗೌರವಾಧ್ಯಕ್ಷರೂ ಆದ ಶ್ರೀ ಸದಾಶಿವ ಕೆ.ಶೆಟ್ಟಿ ಕೂಳೂರು ಕನ್ಯಾನ ಇವರು ನೂತನ ‘ಶ್ರೀಮಾತಾ ಅನ್ನಛತ್ರ’ವನ್ನು ಉದ್ಘಾಟಿಸಿ “ಬಾಲ್ಯದಲ್ಲಿ ಹಿರಿಯರು ಹೇಳಿಕೊಟ್ಟ ಸಂಸ್ಕøತಿಗಳನ್ನು ನೆನಪಿನಲ್ಲಿಟ್ಟು ಕೊಳ್ಳಬೇಕು. ಸಮಾಜದ ಏಳಿಗೆಗಾಗಿ ನಿರಂತರವಾಗಿ ಪ್ರಯತ್ನಪಡುತ್ತಿರುವ ಸಂತ ಒಡಿಯೂರು ಶ್ರೀಗಳವರು. ಗುಡ್ಡಪ್ರದೇಶವಿದ್ದ ಈ ಸ್ಥಳವನ್ನು ಧಾರ್ಮಿಕ ಕ್ಷೇತ್ರವಾಗಿ ಪರಿವರ್ತಿಸಿದ ಕೀರ್ತಿ ಶ್ರೀಗಳಿಗೆ ಸಲ್ಲಬೇಕು. ಸಮಾಜವನ್ನು ತಿದ್ದಿ ತೀಡುವ ಕೆಲಸ ಸದಾ ಕ್ಷೇತ್ರದಿಂದ ಆಗುತ್ತಿದೆ. ಎಲ್ಲರೂ ಒಟ್ಟಾದರೆ ಅಭಿವೃದ್ದಿ ಸಾಧ್ಯ. ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ನಮ್ಮಿಂದಾಗಬೇಕು” ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಪ್ರಾಂತ ಸಹಕಾರ್ಯವಾಹ ಶ್ರೀ ಪಿ.ಎಸ್. ಪ್ರಕಾಶ್‍ರವರು ಮಾತನಾಡಿ “ಧರ್ಮ ಅಧಿಪತ್ಯ ಪ್ರತಿಯೊಂದು ಕ್ಷೇತ್ರದಲ್ಲಿ ಆದಾಗ ದೇಶ ಸುಭಿಕ್ಷೆಯಾಗುತ್ತದೆ. ಸಮಾಜದಲ್ಲಿ ಧರ್ಮ ಧಾರಣೆಯಾಗಬೇಕು. ಜಗತ್ತಿನ ಶಾಂತಿಗೆ ಹಿಂದೂ ಧÀರ್ಮ ಕಾರಣವಾಗಿದೆ. ಹಿಂದೂ ಧರ್ಮ ಗಟ್ಟಿಯಾದಾಗ ಜಗತ್ತಿನಲ್ಲಿ ಶಾಂತಿಯನ್ನು ಕಾಣಬಹುದು. ಜನ್ಮದಿನ ಶ್ರೀಗಳದ್ದು, ಉತ್ಸವ ನಮ್ಮದು. ಧರ್ಮಪೀಠದ ಆದಾರದಲ್ಲಿ ದೇಶ ನಿಂತಿದೆ. ಎಲ್ಲಾ ಕ್ಷೇತ್ರದಲ್ಲಿ ಧರ್ಮ ಪ್ರಮುಖವಾಗಬೇಕು. ಧರ್ಮ ದಂಡ ಶ್ರೇಷ್ಟವಾಗಬೇಕು. ಎಲ್ಲಾ ಕ್ಷೇತ್ರದಲ್ಲಿ ಧರ್ಮವನ್ನು ತರಬೇಕು. ಧರ್ಮವನ್ನು ಗಟ್ಟಿಗೊಳಿಸಿ ನಮ್ಮೊಳಗಿನ ವೈಮನಸ್ಸನ್ನು ದೂರಮಾಡಿ ಕೆಲಸ ಮಾಡುವ ಮನಸ್ಸು ನಮ್ಮಿಂದ ಆರಂಭವಾಗಬೇಕು” ಎಂದರು.
ಬಂಟ್ವಾಳ ಶಾಸಕ ಶ್ರೀ ರಾಜೇಶ್ ನಾಯ್ಕ ಉಳಿಪ್ಪಾಡಿಗುತ್ತುರವರು ಮಾತನಾಡಿ “ಹಲವಾರು ವರುಷಗಳಿಂದ ಕ್ಷೇತ್ರದೊಂದಿಗೆ ನನ್ನ ಸಂಬಂಧವಿದೆ. ಕ್ಷೇತ್ರದಿಂದ ಹಲವಾರು ಸಮಾಜಮುಖಿಕಾರ್ಯ ನಿರಂತರವಾಗಿ ನಡೆಯುತ್ತಿರುವುದು ಸಂತಸ ತಂದಿದೆ. ಶ್ರೀಗಳ ಕನಸುಗಳನ್ನು ಈಡೇರಿಸುವಲ್ಲಿ ಶ್ರೀಗಳವರು ನಮಗೂ ಅವಕಾಶಗಳನ್ನು ನೀಡಿರುವುದಕ್ಕೆ ನಾನು ಅಭಾರಿಯಾಗಿದ್ದೇನೆ. ಇನ್ನು ಮುಂದೆಯೂ ಕ್ಷೇತ್ರಕ್ಕೆ ನನ್ನಿಂದಾದ ಕೊಡುಗೆಗಳನ್ನು ನೀಡಲು ಸಿದ್ಧನಿದ್ದೇನೆ” ಎಂದು ಭರವಸೆ ನೀಡಿದರು.
ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಅನಸೂಯಾ ಕಿಶೋರ್ ಶೆಟ್ಟಿ ಇವರು ಮಾತನಾಡಿ “ಕ್ಷೇತ್ರದ ಸಮಾಜಮುಖಿ ಕೆಲಸಗಳ ಮೂಲಕ ಜನರಿಗೆ ಸಾಂತ್ವನ ಸಿಕ್ಕಿದೆ ಎನ್ನುವುದಕ್ಕೆ ಇಲ್ಲಿ ಸೇರಿರುವ ಜನಸ್ತೋಮವೇ ಕಾರಣ. ಹಲವರ ನಿಸ್ವಾರ್ಥಸೇವೆಯ ಫಲವಾಗಿ ಕ್ಷೇತ್ರ ಇಷ್ಟೊಂದು ಬೆಳೆಯಲು ಕಾರಣವಾಗಿದೆ. ಮಹಿಳೆಯರ ಸಬಲೀಕರಣಕ್ಕೆ ಕ್ಷೇತ್ರದ ಕೊಡುಗೆ ಅಪಾರವಾಗಿದೆ” ಎಂದರು.
ಪುತ್ತೂರು ಶಾಸಕ ಶ್ರೀ ಸಂಜೀವ ಮಠಂದೂರು, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಶ್ರೀ ಡಿ. ವೇದವ್ಯಾಸ ಕಾಮತ್, ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ, ಮುಲ್ಕಿ-ಮೂಡಬಿದ್ರೆ ಕ್ಷೇತ್ರ ಶಾಸಕ ಶ್ರೀ ಉಮಾನಾಥ ಎ.ಕೋಟ್ಯಾನ್, ಮುಂಬೈನ ಉದ್ಯಮಿ ಶ್ರೀ ಪ್ರವೀಣ್‍ಭೋಜ ಶೆಟ್ಟಿ ಮುಂಬೈ, ಮಂಗಳೂರಿನ ಕಾಂಚನ ಆಟೊಮೊಬೈಲ್ಸ್ ಪ್ರೈವೇಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕರಾದ ಶ್ರೀ ಪ್ರಸಾದ್‍ರಾಜ್ ಕಾಂಚನ್, ಮುಂಬೈಯ ಉದ್ಯಮಿಗಳಾದ ಶ್ರೀ ವಾಮಯ್ಯ ಬಿ. ಶೆಟ್ಟಿ, ಶ್ರೀ ದಯಾನಂದ ಹೆಗ್ಡೆ, ಮುಲುಂಡ್, ಯಮುನಾ ಬೋರ್‍ವೆಲ್ಸ್‍ನ ಮಾಲಕ ಶ್ರೀ ಪುರುಷೋತ್ತಮ ಶೆಟ್ಟಿ, ಒಡಿಯೂರು ಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಮಿತಿಯ ಕೋಶಾಧಿಕಾರಿಗಳಾದ ಶ್ರೀ ಎ. ಸುರೇಶ್ ರೈ, ಶ್ರೀ ಎ. ಅಶೋಕ್‍ಕುಮಾರ್, ಕಾರ್ಯಾಧ್ಯಕ್ಷ ಲೋಕನಾಥ ಜಿ. ಶೆಟ್ಟಿ ತಾಳಿಪ್ಪಾಡಿಗುತ್ತು, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಮಟ್ಟದ ಈಜು ಸ್ಪರ್ದೆಯಲ್ಲಿ ಚಿನ್ನದ ಪದಕ ವಿಜೇತ ಚಿ| ಚಿಂತನ್ ಎಸ್.ಶೆಟ್ಟಿ ಜಮ್ಮದಮನೆ ಹಾಗೂ ಶ್ರೀಮದ್ಭಗವದ್ಗೀತೆ 18 ಅಧ್ಯಾಯಗಳ ಕಂಠಪಾಠ ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತೆ, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವಿದ್ಯಾರ್ಥಿನಿ ಕು. ಸಾನ್ವಿ ಸಿ.ಎಸ್.ರವರಿಗೆ ಬಾಲಪ್ರತಿಭಾ ಪುರಸ್ಕಾರ ನೀಡಿ ಪೂಜ್ಯ ಶ್ರೀಗಳವರು ಹರಸಿದರು.
ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠವು ಜಿಲ್ಲಾಮಟ್ಟದ ಶಾಲಾ ಮಕ್ಕಳಿಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಕು. ಸ್ವಸ್ತಿಕಾ ರೈ ಪ್ರಥಮ, ಎಸ್.ವಿ.ಎಸ್. ಟೆಂಪಲ್ ಸ್ಕೂಲ್‍ನ ಕು. ಪ್ರಾರ್ಥನಾ ಮಲ್ಯ ದ್ವಿತೀಯ, ವಿಟ್ಲ ಜೇಸೀಸ್ ಶಾಲೆಯ ಕು| ಮನೋನ್ಮಯೀ ಕೆ. ತೃತೀಯ ಬಹುಮಾನ ಪಡೆದರು.
ಗ್ರಾಮೋತ್ಸವದ ಅಂಗವಾಗಿ ನಡೆದ ಕೆಸರು ಗದ್ದೆ ಆಟೋಟಗಳು, ಹಾಗೂ ಹೊರಾಂಗಣ ಮತ್ತು ಒಳಾಂಗಣ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಭವ್ಯ ಶೋಭಾಯಾತ್ರೆಯಲ್ಲಿ ರಾಜಾಂಗಣಕ್ಕೆ ಪೂಜ್ಯ ಶ್ರೀಗಳವರನ್ನು ಸ್ವಾಗತಿಸಲಾಯಿತು. ಸನ್ನಿಧಿಯಲ್ಲಿ ಬೆಳಗ್ಗೆ ಶ್ರೀ ಗಣಪತಿ ಹವನ, ಮಹಾಪೂಜೆ ನಡೆಯಿತು. ರಾಜಾಂಗಣದಲ್ಲಿ ಸಾದ್ವಿ ಶ್ರೀ ಶ್ರೀ ಮಾತಾನಂದಮಯೀಯವರ ‘ಭಜನಾ ಸತ್ಸಂಗ’ದೊಂದಿಗೆ ಕಾರ್ಯಕ್ರಮ ಶುಭಾರಂಭಗೊಂಡಿತು.
ವೇ|ಮೂ| ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ, ಕಾರ್ಯಾಧ್ಯಕ್ಷ ಶ್ರೀ ಲೋಕನಾಥ ಜಿ.ಶೆಟ್ಟಿ ದಂಪತಿಗಳು ಪೂಜ್ಯ ಶ್ರೀಗಳ ಪಾದಪೂಜೆ – ಶ್ರೀ ಗುರುಪಾದುಕಾರಾಧನೆ ನೆರವೇರಿಸಿದರು. ನಂತರ ಸುಮಂಗಲೆಯರು ಪೂಜ್ಯ ಶ್ರೀಗಳವರನ್ನು ಉಯ್ಯಾಲೆಯಲ್ಲಿ ತೂಗಿದರು. ಬಳಿಕ ಚಾಲಿ ಅಡಿಕೆಯಲ್ಲಿ ಪೂಜ್ಯ ಶ್ರೀಗಳವರ ತುಲಾಭಾರ ಮಾಡಲಾಯಿತು. ಊರು-ಪರವೂರುಗಳಿಂದ ಆಗಮಿಸಿದ ಸಾವಿರಾರು ಭಕ್ತರಿಂದ ಕ್ಷೇತ್ರದ ಪರಿಸರ ತುಂಬಿತುಳುಕುತ್ತಿತ್ತು. ಎಲ್ಲರೂ ಗುರುವಂದನೆ ಸಲ್ಲಿಸಿ ಆಶೀರ್ವಾದ ಪಡೆದರು.
50 ವಿಕಲಚೇತನರಿಗೆ ಕೃತಕ ಸಲಕರಣೆಗಳು ಅದರಲ್ಲಿ 22 ಕೃತಕ ಕೈ, 2 ಫಲಾನುಭವಿಗಳಿಗೆ ಕೈ ಮತ್ತು ಕಾಲು, ಇಬ್ಬರಿಗೆ ಕೈ, ಇಬ್ಬರಿಗೆ ಕ್ಯಾಲಿಪರ್, ಇಬ್ಬರಿಗೆ ವಾಟರ್‍ಬೆಡ್, 20 ಮಂದಿಗೆ ಗಾಲಿಕುರ್ಚಿಗಳನ್ನು ವಿತರಿಸಲಾಯಿತು. ಅನಾರೋಗ್ಯದಲ್ಲಿರುವ 105 ಫಲಾನುಭವಿಗಳಿಗೆ ಚಿಕಿತ್ಸೆಗೆ ಸಹಾಯ. 180 ಕುಟುಂಬಕ್ಕೆ ಮರಣ ಸಾಂತ್ವನ, ಏಳು ಜನರಿಗೆ ಮನೆ ದುರಸ್ಥಿಗೆ ಸಹಾಯ, 8 ಪ್ರಾಥಮಿಕ ಶಾಲೆಗಳಿಗೆ ಗೌರವ ಶಿಕ್ಷಕರ ಕೊಡುಗೆ, ಮೂವರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಪೂಜ್ಯ ಶ್ರೀಗಳವರು ವಿತರಿಸಿದರು.
ಮಾಜಿ ಶಾಸಕ, ಜನ್ಮದಿನೋತ್ಸವ ಸಮಿತಿ ಅಧ್ಯಕ್ಷ ಶ್ರೀ ಕೆ. ಪದ್ಮನಾಭ ಕೊಟ್ಟಾರಿ ಸ್ವಾಗತಿಸಿ, ಜನ್ಮದಿನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀ ಯಶವಂತ ವಿಟ್ಲ ವಂದಿಸಿದರು. ಸಂಘಟನಾ ಕಾರ್ಯದರ್ಶಿ ಶ್ರೀ ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸಂಜೆ ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಕುಂದಾಪುರದ ನೃತ್ಯ ವಸಂತ ನಾಟ್ಯಾಲಯದ ವಿದುಷಿ ಪ್ರವಿತಾ ಅಶೋಕ ಅವರ ನಿರ್ದೇಶನದಲ್ಲಿ ‘ನೃತ್ಯ ವೈಭವ’ ಸಂಪನ್ನಗೊಂಡಿತು. ರಾತ್ರಿ ರಂಗಪೂಜೆ, ವಿಶೇಷ ಬೆಳ್ಳಿರಥೋತ್ಸವ ಸೇವೆ ಜರಗಿತು.

 

The divine power, success, achievements, sacrifice, courage, spirituality, social thinking and humble service of his holiness have contributed a lot to the success of the Shree Samsthanam.

 
Shree Gurudevananda Swamiji
Back To Top