+91 8255-266211
info@shreeodiyoor.org

ಕರ್ತವ್ಯ ಪ್ರಜ್ಞೆ, ಪ್ರಾಮಾಣಿಕತೆ, ನಿಷ್ಠೆಗೆ ಮತ್ತೊಂದು ಹೆಸರು ಜನಾರ್ದನ ಮಾಸ್ಟರ್ – ಒಡಿಯೂರು ಶ್ರೀ

“ಸಂಪತ್ತು, ಮಿತ್ರರು, ಮನೆ–ಮಠ ಎಲ್ಲವೂ ಪುನರ್ ಲಭ್ಯವಾಗುವುದು. ಆದರೆ ಶರೀರವನ್ನು ನಾವು ಮತ್ತೆ ಪಡೆಯಲಾಗದು. ಭಗವಂತ ಕರುಣಿಸಿದ ಬುದ್ಧಿ, ವಿವೇಕ, ಜ್ಞಾನವನ್ನು ಸದುಪಯೋಗಪಡಿಸಿಕೊಂಡು ನಮ್ಮ ಜೀವನ ಪಯಣವನ್ನು ಸುಗಮವಾಗಿಸಿಕೊಳ್ಳಬೇಕು. ಅದನ್ನೇ ದಾಸರು ಹೇಳಿದಂತೆ ‘ಸಾಧನ ಶರೀರವಿದು ನೀ ದಯದಿ ಕೊಟ್ಟದ್ದು ಸಾಧಾರಣವಲ್ಲ ಸಾಧು ಪ್ರಿಯನೇ…’ ಎನ್ನುವಂತೆ ನಮ್ಮ ಬದುಕು ಶ್ರೇಷ್ಠತೆಯನ್ನು ಪಡೆಯಬೇಕು. ಇದನ್ನೇ ತನ್ನ ಜೀವನದಲ್ಲಿ ಅಳವಡಿಸಿಕೊಂಡು ಓರ್ವ ಆದರ್ಶ ಶಿಕ್ಷಕರಾಗಿ, ಆಧ್ಯಾತ್ಮಿಕತೆಯನ್ನು ಮೈಗೂಡಿಸಿಕೊಂಡಿದ್ದವರು ಆತ್ಮೀಯ ಶ್ರೀ ಜನಾರ್ದನ ಶೆಟ್ಟಿಯವರು. ಶಿಸ್ತು, ಸರಳ ಸಜ್ಜನಿಕೆ, ಪ್ರಾಮಾಣಿಕತೆ, ನಿಷ್ಠೆ, ಕರ್ತವ್ಯ ಪ್ರಜ್ಞೆಗೆ ಮತ್ತೊಂದು ಹೆಸರಾಗಿದ್ದವರು. ಅಧ್ಯಾತ್ಮ ಲೋಕಕ್ಕೆ ತಮ್ಮ ಪುತ್ರಿ (ಸಾಧ್ವಿ ಶ್ರೀ ಮಾತಾನಂದಮಯೀ)ಯನ್ನು ಕೊಡುಗೆ ನೀಡಿದ ಆದರ್ಶ ಬದುಕು ಅವರದ್ದು. ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಹನ್ನೆರಡು ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದನ್ನು ಸ್ಮರಿಸಿದ ಪೂಜ್ಯ ಶ್ರೀಗಳವರು ಅವರ ಆತ್ಮಕ್ಕೆ ಸಾಯುಜ್ಯ ಪ್ರಾಪ್ತಿಯಾಗಲಿ. ಅವರ ಆದರ್ಶ ಬದುಕು ಇತರರಿಗೆ ಬೆಳಕಾಗಲಿ. ಮಾಸ್ಟರ್‍ರವರ ಬಗ್ಗೆ ಅವರ ಪ್ರೀತಿಯ ಶಿಷ್ಯ ಕಣಿಯೂರು ಶ್ರೀಗಳು ಬರೆಯುವ ಕೃತಿ ಬೇಗನೆ ಬೆಳಕು ಕಾಣಲಿ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಆಯೋಜಿಸಿದ್ದ ನಿವೃತ್ತ ಶಿಕ್ಷಕ ಶ್ರೀ ಕೆ. ಜನಾರ್ದನ ಶೆಟ್ಟಿಯವರ ನುಡಿನಮನ ಕಾರ್ಯಕ್ರಮದಲ್ಲಿ ಆಶೀರ್ವಚನಗೈದರು.
ಈ ಸುಸಂದರ್ಭ ಭಾಗವಹಿಸಿದ್ದ ಕಣಿಯೂರು ಶ್ರೀ ಚಾಮುಂಡೇಶ್ವರೀ ಕ್ಷೇತ್ರದ ಶ್ರೀ ಶ್ರೀ ಮಹಾಬಲ ಸ್ವಾಮೀಜಿಯವರು ಮಾತನಾಡಿ “ಅವರೊಬ್ಬರು ಶ್ರೇಷ್ಠ ಗುರುಗಳು. ನಿಷ್ಟುರ ಇಲ್ಲದೆ ಬದುಕಿದ ದಿವ್ಯ ಚೇತನ ಅವರದ್ದು. ಪ್ರೀತಿಯ ನಿರಾಡಂಬರ ಜೀವನ ಶೈಲಿ” ಎಂದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ತಮ್ಮ ತೀರ್ಥರೂಪರಿಗೆ ಭಾವಪೂರ್ಣ ನುಡಿನಮನ ಸಲ್ಲಿಸಿದರು.
ಶ್ರೀ ರೇಣುಕಾ ಎಸ್.ರೈಯವರು ಮಾಸ್ಟರ್‍ರವರ ಪ್ರೀತಿಯ ಹೊತ್ತಗೆ ‘ಮಂಕುತಿಮ್ಮನ ಕಗ್ಗ’ದ ಕೆಲವು ಕಾವ್ಯವನ್ನು ಸುಶ್ರಾವ್ಯವಾಗಿ ಹಾಡಿ ತಮ್ಮ ತೀರ್ಥರೂಪರಿಗೆ ಕಾವ್ಯ ನಮನ ಸಲ್ಲಿಸಿದರು.
ಹಿರಿಯ ಪತ್ರಕರ್ತರುಗಳಾದ ಶ್ರೀ ಮಲಾರು ಜಯರಾಮ ರೈ, ಶ್ರೀ ಯಶವಂತ ವಿಟ್ಲ, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಶಾಲಾ ಸಂಚಾಲಕ ಶ್ರೀ ಗಣಪತಿ ಭಟ್ ಸೇರಾಜೆ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ಉಪಾಧ್ಯಕ್ಷ ಶ್ರೀ ಪಿ. ಲಿಂಗಪ್ಪ ಗೌಡ, ಶಾಲಾ ಶಿಕ್ಷಕಿ ಶ್ರೀಮತಿ ನಿವೇದಿತಾ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಸರ್ವಾಣಿ ಪಿ.ಶೆಟ್ಟಿ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಶ್ರೀ ಎ. ಅಶೋಕ್‍ಕುಮಾರ್, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸೇವಾದೀಕ್ಷಿತ ಶ್ರೀ ರಾಧಾಕೃಷ್ಣ ನುಡಿನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.

 

The divine power, success, achievements, sacrifice, courage, spirituality, social thinking and humble service of his holiness have contributed a lot to the success of the Shree Samsthanam.

 
Shree Gurudevananda Swamiji
Back To Top