+91 8255-266211
info@shreeodiyoor.org

ಒಡಿಯೂರು ರಥೋತ್ಸವ – ತುಳುನಾಡ ಜಾತ್ರೆ

“ಎಚ್ಚರದಿಂದ ಬದುಕುವ ಗುಣ ನಮ್ಮದಾಗಬೇಕು”
ಒಡಿಯೂರು ರಥೋತ್ಸವ – ತುಳುನಾಡ ಜಾತ್ರೆ
ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಜ್ಞಾನವಾಹಿನಿ ಸಮಾರೋಪ – ಆನಂದೋತ್ಸವದಲ್ಲಿ – ಪೂಜ್ಯ ಶ್ರೀಗಳವರಿಂದ ಆಶೀರ್ವಚನ

ಫೆ.11: “ಇದೊಂದು ಸಂಭ್ರಮದ ಸಂದರ್ಭ. ಸಂತನ ಬದುಕು ನೀರಿನಲ್ಲಿರುವ ಮೀನಿನಂತೆ. ಸಮಾಜದಲ್ಲಿರುವ ಕೊಳೆಯನ್ನು ತೆಗೆಯುವ ಕೆಲಸ ಸಂತರಿಂದ ಆಗುತ್ತಿದೆ. ಮಕ್ಕಳಿಗೆ ಸಂಸ್ಕಾರ ನೀಡಿ ಅವರನ್ನು ಸತ್ಪ್ರಜೆಗಳನ್ನಾಗಿಸುವ ಪ್ರಯತ್ನವಾಗಬೇಕು. ದಾನಗುಣ ಶ್ರೇಷ್ಠವಾದುದು. ಎಚ್ಚರದಿಂದ ಬದುಕುವ ಗುಣವೂ ನಮ್ಮದಾಗಬೇಕು” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಸಂದೇಶ ನೀಡಿದರು.
ರಾಜಾಂಗಣದ ‘ಆತ್ರೇಯ ಮಂಟಪ’ದಲ್ಲಿ ಜರಗಿದ ಶ್ರೀ ಒಡಿಯೂರು ರಥೋತ್ಸವ – ತುಳುನಾಡ ಜಾತ್ರೆ, ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಜ್ಞಾನವಾಹಿನಿ ಸಮಾರೋಪ – ಆನಂದೋತ್ಸವ ಕಾರ್ಯಕ್ರಮದ ಧರ್ಮಸಭೆಯಲ್ಲಿ ಅನುಗ್ರಹ ಸಂದೇಶ ನೀಡಿದ ಪೂಜ್ಯ ಶ್ರೀಗಳವರು “ಭಗವಂತನ ಲೆಕ್ಕಾಚಾರದಲ್ಲಿ ಎಡಿಟ್ – ಡಿಲಿಟ್ ಮಾಡಲಾಗದು. ಸಂಪತ್ತನ್ನು ದಾನ ಮಾಡಬೇಕು ಇಲ್ಲವಾದಲ್ಲಿ ಭೋಗಮಾಡಬೇಕು. ಇಲ್ಲವಾದಲ್ಲಿ ಅದು ನಾಶವಾಗುತ್ತದೆ. ಧರ್ಮದ ಒಡಲು ಸತ್ಯ. ಬದುಕಿನಲ್ಲಿ ಲೆಕ್ಕಾಚಾರ ಅತೀ ಮುಖ್ಯ. ಹೃದಯ ಪೀಠ ಬಲವಾದಾಗ ಬದುಕು ಸುಂದರವಾಗುತ್ತದೆ. ಜೀವನ ರಥಕ್ಕೆ ಪಥಮುಖ್ಯ. ಅದುವೇ ಧರ್ಮಪಥ. ಜೀವನದಲ್ಲಿ ವ್ಯಕ್ತಿತ್ವವನ್ನು ಮೂಡಿಸುವ ಶಿಲ್ಪಿಗಳು ನಾವಾಗಬೇಕು” ಎಂದರು.
ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಿ “ಸಮರ್ಪಣಾ ಭಾವದ ಭಕ್ತಿ ನಮ್ಮಲ್ಲಿರಬೇಕು. ಸಮಾಜದಲ್ಲಿ ರಾಮನ ಸಂದೇಶ ಪ್ರಕಾಶವಾಗಿ ಬೆಳಗಬೇಕು. ಆಧ್ಯಾತ್ಮಿಕ ಮೌಲ್ಯ ಮನೆಮನೆಗೆ ತಲುಪಿಸುವ ಕೆಲಸ ಸಂತರಿಂದ ಆಗುತ್ತಿದೆ. ಹಿಂದೂ ಸಮಾಜ ಸುದೃಢವಾಗಲು ಮತೀಯವಾದ ಬಿಡಬೇಕು. ಸಂತನ ಆದರ್ಶವನ್ನು ನಾವೆಲ್ಲ ಪಾಲಿಸಬೇಕು. ವಿಶ್ವಮಾನ್ಯವಾದ ನಮ್ಮ ದೇಶ ವಿಶ್ವ ಗುರುವಾಗಿದೆ. ನಾವೆಲ್ಲರೂ ಒಗ್ಗಟ್ಟಾಗಿ ಹಿಂದೂ ಧರ್ಮವನ್ನು ಉಳಿಸುವ ಕೆಲಸ ಮಾಡುವ. ನಮ್ಮ ಬದುಕಿನ ದಾರಿಗೆ ಗುರುಗಳು ಶಕ್ತಿ ತುಂಬಲಿದ್ದಾರೆ. ಗುರುತತ್ತ್ವವನ್ನು ಅರ್ಥೈಸಿ ಜೀವನ ನಡೆಸಿ. ಸಾಧನೆಯ ಧೀಮಂತಿಗೆಯನ್ನು ಮಕ್ಕಳಿಗೆ ತಿಳಿಸುವ ಕೆಲಸಮಾಡಬೇಕಾಗಿದೆ” ಎಂದರು.
ಸಾಧ್ವೀ ಶ್ರೀ ಮಾತಾನಂದಮಯೀಯವರು ಆಶೀರ್ವಚನ ನೀಡಿ “ಗುರು ಎಂದರೆ ತಾಯಿಯ ಮಡಿಲು. ಆನಂದ ಎಂಬುದು ಭಾರತದ ಅಡಿಪಾಯ. ಪೂಜ್ಯ ಶ್ರೀಗಳವರ ಷಷ್ಠ್ಯಬ್ದ ಕಾರ್ಯಕ್ರಮವನ್ನು ಗುರುಬಂಧುಗಳು ವಿವಿಧ ಕಡೆಗಳಲ್ಲಿ ಬಹಳ ಸುಂದರವಾಗಿ ಮಾಡಿದ್ದಾರೆ. ಈ ಕಾರ್ಯಕ್ರಮಗಳು ಹಲವಾರು ಬಡವರ ಬಾಳಿನಲ್ಲಿ ಬೆಳಗಿದಂತಾಗಿದೆ” ಎಂದರು.
ಪುತ್ತೂರು ವಿವೇಕಾನಂದ ವಿದ್ಯಾವರ್ದಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕರವರು ದೀಪಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ “ಒಡಿಯೂರು ಬಹುದೊಡ್ಡ ಆಧ್ಯಾತ್ಮ ಕ್ಷೇತ್ರವಾಗಿ ಮೂಡಿಬಂದಿದೆ. ದೇಶದ ಉಸಿರು ಆಧ್ಯಾತ್ಮ. ದೇಶಕ್ಕೆ ಜೀವ ತುಂಬಿದವರು ಇಂತಹ ಸಂತರು. ತ್ಯಾಗಪೂರ್ಣ ಸೇವೆಗೆ ದೇಶದಲ್ಲಿ ಮಹತ್ವವಿದೆ. ಸಾಧು ಸಂತರು ದೇಶದ ಅಸ್ಥಿತ್ವವನ್ನು ಉಳಿಸಿದ್ದಾರೆ. ಸಂತನ ಬದುಕು ಲೋಕದ ಹಿತಕ್ಕೆ. ತಾಯಿ ಇಲ್ಲದೆ ಜೀವನವಿಲ್ಲ. ತಾಯಿಯ ಜೀವನ ಶ್ರೇಷ್ಠವಾದದ್ದು. ತುಳುವಿನ ದೊಡ್ಡ ಶತ್ರು ಆಂಗ್ಲಬಾಷೆ. ಅದೇ ನಮ್ಮನ್ನು ಸರ್ವನಾಶಮಾಡುತ್ತದೆ. ಆಂಗ್ಲಭಾಷೆಯ ವ್ಯಾಮೋಹದಿಂದ ಸಂಸ್ಕøತಿ ನಾಶವಾಗುತ್ತಿದೆ. ಸಂಸ್ಕೃತಿ ಸಂಸ್ಕಾರವನ್ನು ಕಲಿಸುವ ಕೆಲಸ ತಾಯಂದಿರಿಂದ ಆಗಬೇಕು. ತಾಯಂದಿರು ತಮ್ಮ ಜವಾಬ್ದಾರಿಯನ್ನು ಮರೆಯದೆ ಪಾಲಿಸಬೇಕು. ತಮ್ಮ ಮನೆಗಳಲ್ಲಿ ಭಾವನಾತ್ಮಕ ಶಬ್ದಗಳ ಬಳಕೆ ಮಾಡಿ. ಹಣದ ಹಿಂದೆ ಗುಣ ಬಾರದು, ಗುಣವಿದ್ದರೆ ಹಣ ಬರುತ್ತದೆ. ಧರ್ಮ ಸಂಸ್ಕೃತಿ ಜೀವನ ಮೌಲ್ಯ ಅಪಾಯದಲ್ಲಿದೆ. ಹಿಂದೂ ಸಮಾಜ ಎಚ್ಚೆತ್ತುಕೊಳ್ಳಬೇಕು ಇಲ್ಲವಾದಲ್ಲಿ ಸರ್ವನಾಶ ಖಂಡಿತ. ಆಗ ಮಾತ್ರ ನಮ್ಮ ಮಠ ಮಂದಿರಗಳು ಉಳಿಯಲು ಸಾಧ್ಯ” ಎಂದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಮುಂಬೈ ಹೇರಂಬ ಇಂಡಸ್ಟ್ರೀಸ್‍ನ ಆಡಳಿತ ನಿರ್ದೇಶಕರಾದ ಶ್ರೀ ಸದಾಶಿವ ಕೆ. ಶೆಟ್ಟಿ ಇವರು ಸೇರಾಜೆ ಗಣಪತಿ ಭಟ್ ಅವರ ಒಡಿಯೂರು ಶ್ರೀಗಳವರೊಂದಿಗಿನ ಅನುಭವದ ಲೇಖನಗಳ ಕೃತಿ ‘ಸ್ಫಟಿಕಮಾಲೆ’ಯನ್ನು ಬಿಡುಗಡೆಗೊಳಿಸಿದರು. ಕು| ನಿತ್ಯಶ್ರೀ ಎಸ್.ರೈಯವರು ಆಂಗ್ಲ ತರ್ಜಮೆ ಮಾಡಿದ ‘ದತ್ತಪ್ರಕಾಶ’ ದ್ವೈಮಾಸಿಕದ ಪೂಜ್ಯ ಶ್ರೀಗಳವರ ಅಂಕಣ ‘ಅಮೃತವರ್ಷ’ ಕೃತಿಯನ್ನು ಮಂಗಳೂರಿನ ಚಾರ್ಟೆಡ್ ಅಕೌಂಟೆಂಟ್ ಶ್ರೀ ಸಿಎ| ಶಾಂತರಾಮ ಶೆಟ್ಟಿ ಲೋಕಾರ್ಪಣೆ ಮಾಡಿದರು.
ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಪುಣೆ ಘಟಕದ ಅಧ್ಯಕ್ಷ ಶ್ರೀ ಪ್ರಭಾಕರ ಶೆಟ್ಟಿ, ಮುಂಬೈನ ಉದ್ಯಮಿ ಶ್ರೀ ವಾಮಯ್ಯ ಬಿ.ಶೆಟ್ಟಿ ಚೆಂಬೂರು, ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಶ್ರೀ ಪ್ರೇಮಾನಂದ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಒಡಿಯೂರು ಶ್ರೀಗುರುದೇವ ಸೇವಾ ಬಳಗ ಹಾಗೂ ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ ಗುರುಕಾಣಿಕೆ ಸಮರ್ಪಿಸಿ ಗುರುವಂದನೆ ಸಲ್ಲಿಸಿದರು. ಒಡಿಯೂರು ಶ್ರೀ ಸಂಸ್ಥಾನದ ವೈದಿಕ ಬಂಧುಗಳು ಗುರುವಂದನೆ ಸಲ್ಲಿಸಿದರು.
ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಸಮಿತಿ ಕಾರ್ಯಾಧ್ಯಕ್ಷ ಶ್ರೀ ಕೆ. ಪದ್ಮನಾಭ ಕೊಟ್ಟಾರಿ ಸ್ವಾಗತಿಸಿದರು. ಶ್ರೀ ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ರೇಣುಕಾ ಎಸ್.ರೈ ಪ್ರಾರ್ಥಿಸಿದರು.

ಧಾರ್ಮಿಕ ಕಾರ್ಯಕ್ರಮ: ಪ್ರಾತಃಕಾಲ ಶ್ರೀ ಗಣಪತಿ ಹವನ, ಸ್ವಯಂಭೂ ನಾಗರಾಜ ಸನ್ನಿಧಿಯಲ್ಲಿ ನಾಗತಂಬಿಲ, ಘಂಟೆ 9.30ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಆರಂಭಗೊಂಡಿತು. ಮಧ್ಯಾಹ್ನ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಿತು.

ವೈಭವೋಪೇತ ರಥೋತ್ಸವ: ಸಾಯಂಕಾಲ ಶ್ರೀ ದತ್ತಾಂಜನೇಯ ದೇವರ ವೈಭವದ ರಥಯಾತ್ರೆಯು ರಂಗಪೂಜೆ, ಮಹಾಪೂಜೆಯ ಬಳಿಕ ಆರಂಭಗೊಂಡಿತು. ಶ್ರೀ ಸಂಸ್ಥಾನದಿಂದ ಗ್ರಾಮ ದೈವಸ್ಥಾನ(ಮಿತ್ತನಡ್ಕ)ಕ್ಕೆ ಹೋಗಿ, ಕನ್ಯಾನ ಪೇಟೆ ಸವಾರಿ ನಡೆಯಿತು. ನಂತರ ಸದ್ಗುರು ಶ್ರೀ ನಿತ್ಯಾನಂದ ಮಂದಿರದಲ್ಲಿ ವಿಶೇಷ ಪೂಜೆಯ ಬಳಿಕ ರಥವು ಶ್ರೀ ಸಂಸ್ಥಾನಕ್ಕೆ ಹಿಂತಿರುಗಿತು. ಕಾರ್ಯಕ್ರಮದಲ್ಲಿ ಊರಪರವೂರ ಸಾವಿರಾರು ಭಕ್ತಾದಿಗಳು ಪಾಲ್ಗೊಂಡರು.

ವಿಶೇಷ ಆಕರ್ಷಣೆ: ಕನ್ಯಾನ ಸದ್ಗುರು ನಿತ್ಯಾನಂದ ಮಂದಿರದ ಬಳಿ ಪಾವಂಜೆ ಮೇಳದವರಿಂದ ‘ಶ್ರೀ ದೇವಿ ಮಹಾತ್ಮ್ಯೆ’ ಯಕ್ಷಗಾನ ಬಯಲಾಟ ಜರಗಿತು. ಮಿತ್ತನಡ್ಕ ಶ್ರೀ ಮಲರಾಯಿ ದೈವಸ್ಥಾನದ ಬಳಿ ಸಾಂಸ್ಕೃತಿಕ ವೈವಿಧ್ಯ ನಡೆಯಿತು. ಕಮ್ಮಾಜೆಯಲ್ಲಿ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.

 

          

 

The divine power, success, achievements, sacrifice, courage, spirituality, social thinking and humble service of his holiness have contributed a lot to the success of the Shree Samsthanam.

 
Shree Gurudevananda Swamiji
Back To Top