“ಅರಳುವ ಪ್ರತಿಭೆಗಳಿಗೆ ಶಿಬಿರಗಳು ವೇದಿಕೆಯಾಗಲಿ. ಕೌಶಲ್ಯದಿಂದ ಜೀವನ ರೂಪುಗೊಂಡಾಗ ಬದುಕೊಂದು ಕಲೆಯಾಗುವುದು. ಆಗಲೇ ಬದುಕಿಗೆ ಬೆಲೆ ಬರುವುದು. ಅರ್ಥಾತ್ ಜೀವನ ಮೌಲ್ಯಗಳು ವರ್ಧಿಸುವುದು. ಶಿಬಿರಾರ್ಥಿಗಳು ಪರಿಮಳ ತುಂಬಿದ ಬಂಗಾರದ ಹೂವಿನಂತೆ ಅರಳಬೇಕು. ನಮ್ಮಲ್ಲಿ ಸತ್‍ಸಂಕಲ್ಪವಿದ್ದರೆ ಬದುಕೂ ಬಂಗಾರವಾಗುವುದು. ಈ ಮೂಲಕ ಭವ್ಯ ರಾಷ್ಟ್ರ ನಿರ್ಮಾಣದ ಸಂಕಲ್ಪವು ಸಾಕಾರಗೊಳ್ಳುವುದು.” ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಆಶ್ರಯದಲ್ಲಿ ಜರಗಿದ ಶರದೃತು ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
“ಮಕ್ಕಳು ಸತ್ಪ್ರಜೆಗಳಾಗಲು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳು ಮುಖ್ಯ. ಅಸುರೀ ಗುಣಗಳು ನಿರ್ನಾಮವಾಗಿ ಸದ್ಗುಣಗಳನ್ನು ಬೆಳೆಸಲು ನವರಾತ್ರಿಯಲ್ಲಿ ನಡೆಯುವ ಇಂತಹ ಶಿಬಿರಗಳು ಸಹಕಾರಿ” ಎಂದು ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಶ್ರೀ ಹನುಮಾನ್ ಚಾಲೀಸಾ ಪಠಣ ಮಾಡಿಸಿ ಸಂದೇಶ ನೀಡಿದರು.
ವೇದಿಕೆಯಲ್ಲಿ ಶ್ರೀ ಯಶವಂತ ವಿಟ್ಲ ಉಪಸ್ಥಿತರಿದ್ದು ಶುಭಹಾರೈಸಿದರು. ಶಾಲಾ ಸಂಚಾಲಕ ಶ್ರೀ ಸೇರಾಜೆ ಗಣಪತಿ ಭಟ್, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಸರ್ವಾಣಿ ಪಿ.ಶೆಟ್ಟಿ, ಹಿರಿಯ ವಿದ್ಯಾರ್ಥಿಗಳಾದ ಕು| ಅನನ್ಯಲಕ್ಷ್ಮೀ, ಕು| ಶ್ರವಣಕುಮಾರ್, ಶಿಬಿರಾರ್ಥಿಗಳಾದ ಕು| ಕೃತಿ ಎಂ., ಕು| ಅಮನ್ ಉಪಸ್ಥಿತರಿದ್ದರು.
ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ರೇಣುಕಾ ಎಸ್.ರೈ ಆಶಯಗೀತೆ ಹಾಡಿಸಿದರು. ಶಿಕ್ಷಕ ಬಾಯಾರು ಶ್ರೀ ಶೇಖರ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಶಿಬಿರಾರ್ಥಿಗಳು ‘ಮೇಧಿನಿ ನಿರ್ಮಾಣ’ ಯಕ್ಷಗಾನ ತಾಳಮದ್ದಳೆ ಪ್ರಸ್ತುತಪಡಿಸಿದರು. ಯೋಗಗುಚ್ಛವನ್ನೂ ಪ್ರದರ್ಶಿಸಿದರು.
ಹಮ್ಮಿಕೊಂಡ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ಹಾಗೂ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ಪೂಜ್ಯ ಶ್ರೀಗಳವರು ನೀಡಿ ಹರಸಿದರು. ಶಿಕ್ಷಕಿ ಶ್ರೀಮತಿ ಪ್ರಮೀಳಾ ವಿಜೇತರ ಪಟ್ಟಿ ವಾಚಿಸಿದರು. ಶಿಬಿರಾರ್ಥಿ ಕು| ಮೇಘ ಸ್ವಾಗತಿಸಿ, ಕು| ಜ್ಯೋತಿಕಾ ವಂದಿಸಿದರು. ಕು| ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಶಿಕ್ಷಕ-ಶಿಕ್ಷಕಿಯರು ಸಹಕರಿಸಿದರು.